ಫ್ಲೋಬೆರ್, ಗಸ್ಟಾವ್
	1821-80. ಫ್ರೆಂಚ್ ಕಾದಂಬರಿಕಾರ. ರೂನ್‍ನಲ್ಲಿ ಹುಟ್ಟಿದ. ತಂದೆ ತಾಯಿ ನಾರ್ಮನ್ ಬುಡಕಟ್ಟಿಗೆ ಸೇರಿದವರು. ಇವನ ಮೊದಲ ಕೃತಿ ಪ್ರಸಿದ್ಧ ಕಾದಂಬರಿ ಮದಾಮ್ ಬಾವರಿ (1857). ವಿಪರೀತ ಆಸೆ ಆಕಾಂಕ್ಷೆಗಳನಿಟ್ಟುಕೊಂಡು ಕನಸು ಕಾಣುತ್ತಿದ್ದ ಯುವತಿಯೊಬ್ಬಳು ಸದ್ಭಾವನೆ ಸದುದ್ದೇಶಗಳಿದ್ದರೂ ಲೌಕಿಕ ಸರಸಜೀವನದಲ್ಲಿ ಮೂರ್ಖನಾಗಿದ್ದ ವೈದ್ಯನನ್ನು ಮದುವೆಯಾಗಿ ದಾಂಪತ್ಯದಲ್ಲಿ ಅನ್ಯೋನ್ಯತೆ ಸಾಮರಸ್ಯ ಕಾಣದೆ ಮನೋಯಾತನೆಗಳಿಗೆ ಈಡಾಗಿ ಕಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ದುರಂತ ಕತೆ ಇದರ ವಸ್ತು. ಈಕೆಯ ಕ್ರಮ ಕ್ರಮವಾದ ನೈತಿಕ ಪತನ, ಮಾನಸಿಕ ತುಮುಲ, ಆತ್ಮಹತ್ಯೆಗೆ ನೂಕುವ ಸನ್ನಿವೇಶಗಳು ಚಕಿತಗೊಳಿಸುವಷ್ಟು ವಿವರವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ. ಈ ಕಾದಂಬರಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತು. ಅನೀತಿಯುತ ಪುಸ್ತಕ ಬರೆದ ಆರೋಪದ ಮೇಲೆ ಫ್ಲೋಬೆರ್ ವಿಚಾರಣೆಗೆ ಗುರಿಯಾದ. ಅಪರಾಧ ರುಜುವಾತಾಗದೆ ಮುಕ್ತನಾದ ಮರುವರ್ಷ ಕಾರ್ಥೇಜಿನ ಗತಕಾಲದ ಅವಶೇಷಗಳ, ಪ್ರಾಚೀನ ವಸ್ತುಗಳ ಸಂಶೋಧನೆಯಲ್ಲಿ ಮುಳುಗಿದ. ಮದಾಮ್ ಬಾವರಿ ಬರೆದು ವಸ್ತುನಿಷ್ಟ ಸಾಹಿತ್ಯದ ಜನಕವೆನಿಸಿದ ಫ್ಲೋಬೆರ್ ತನ್ನ ಸುತ್ತಮುತ್ತಲಿನ ವಾಸ್ತವ ಬದುಕಿನ ಹೀನತೆಯ ಬಗ್ಗೆ ಜಿಗುಪ್ಸೆಗೊಂಡು ಗತಕಾಲದ ರೋಮ್ ಮತ್ತು ಕಾರ್ಥೇಜ್ ಚಕ್ರಾಧಿಪತ್ಯಗಳ ವೈಭವದ ರೋಮಾಂಚಕಾರಿ ಕಲ್ಪನಾಲೋಕಕ್ಕೆ ನುಗ್ಗಿದ. ಆ ಕಲ್ಪನೆಯ ಫಲವೇ ಸಾಲಮ್ಬೊ ಎಂಬ ಐತಿಹಾಸಿಕ ಕಾದಂಬರಿ. ಸಮಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ರಚಿತವಾದ ಮೂರನೆಯ ಕೃತಿ ಲಾ ಎಜ್ಯುಕೇಷನ್ ಸೆಂಟಿಮೆಂಟೇಲ್. 1874ರಲ್ಲಿ ಲಾ ಟೆಂಟೇಷನ್ ಡಿ ಸೇಂಟ್ ಆಂಟೊಯ್ನೆ ಎಂಬ ಕೃತಿ ಪ್ರಕಟವಾಯಿತು. ಈತನದು ಶುದ್ಧ ಮತ್ತು ಶಕ್ತಿಯುತ ಶೈಲಿ, ವ್ಯಂಗ್ಯ, ವಿಡಂಬನೆ, ವೇದನೆಗಳಿಂದ ಲೇಪಿತವಾದ ನಿರೂಪಣೆ ವಸ್ತುನಿಷ್ಠ ದೃಷ್ಟಿ. ಸಮಕಾಲೀನ ಕಾದಂಬರಿಕಾರರ ಮೇಲೂ, ಆಧುನಿಕ ಸಾಹಿತಗಳ ಮೇಲೂ ಇವನ ಪ್ರಭಾವ ಅಗಾಧವಾಗಿ ಆಗಿದೆ. ಜಾರ್ಜ್ ಸ್ಯಾಂಡ್ ಇವನ ಆಪ್ತಮಿತ್ರ. ಇವರಿಬ್ಬರ ಪತ್ರಗಳ ಸಂಗ್ರಹ ಫ್ಲೋಬೆರ್‍ನ ಮರಣಾನಂತರ ಪ್ರಕಟವಾಯಿತು. ಇವನ ಸಾಹಿತ್ಯ ಮತ್ತು ಕಲಾ ವಿಚಾರ ಲಹರಿಯನ್ನು ಈ ಪತ್ರಗಳಿಂದ ತಿಳಿಯಬಹುದು. ಇವನ ಕಡೆಯ ಕಾದಂಬರಿ ಬೂವಾರ್ ಎಟ್ ಪೆಕ್ಯೂಷೆಟ್ ಅಪೂರ್ಣವಾಗಿ ಉಳಿದು 1881ರಲ್ಲಿ ಮರಣಾನಂತರ ಪ್ರಕಟವಾಯಿತು.									    (ಕೆ.ಬಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ